ಬೆಂಗಳೂರು, ಫೆಬ್ರವರಿ 16: ತನ್ನ ಮಕ್ಕಳ ಭವಿಷ್ಯಕ್ಕಾಗಿ ತಂದೆಯೊಬ್ಬ ನೂರು ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿಟ್ಟಿದ್ದ. ಆ ಆಸ್ತಿಯ ದುರಾಸೆಗೆ ಬಿದ್ದು 25 ಲಕ್ಷ ರೂ. ಕೊಟ್ಟು ಬಾಡಿಗೆ ಹಂತಕರಿಂದ ಜನ್ಮ ಕೊಟ್ಟ ತಂದೆಯನ್ನೇ ಹತ್ಯೆ ಮಾಡಿಸಿದ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಹಂತಕ ಮಗ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವರ್ಷದ ಹಿಂದೆ ಕನಕಪುರ ರಸ್ತೆಯ ಗುಬ್ಬಳಾಲ ಸಮೀಪ ಹತ್ಯೆಯಾಗಿದ್ದ ಉದ್ಯಮಿ ಮಾಧವ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೊಲೀಸರು ಆತನ ಸುಪುತ್ರ ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಮೃತನ ಸಹೋದರ ಶಿವರಾಮ್ ಪ್ರಸಾದ್ ನನ್ನು ಬಂಧಿಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ರಿಯಾಜ್ ಅಬ್ದುಲ್ ಶೇಖ್, ಶಹಬಾಜ್, ಶಾರೂಕ್, ಆದಿಲ್ ಖಾನ್, ಸಲ್ಮಾನ್ ಸೇರಿ ಐವರು ಆರೋಪಿಗಳು ಕಳೆದ ವರ್ಷವೇ ಬಂಧನಕ್ಕೆ ಒಳಗಾಗಿದ್ದರು. ಬಳ್ಳಾರಿ ಸಿಂಗನಮಲ ಮಾಧವ ಮೃತಪಟ್ಟವರು. ದಿ.ಮಾಧವ ಅವರಿಗೆ ಹರಿಕೃಷ್ಣ ಮಗನಾದರೆ ಶಿವರಾಮ್ ಪ್ರಸಾದ್ ಒಡ ಹುಟ್ಟಿದ ಸೋದರ. ಆಸ್ತಿಯ ವ್ಯಾಮೋಹಕ್ಕಾಗಿ ಕಳೆದ ವರ್ಷ ಫೆ.14ರಂದು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಲಾಳ ರಸ್ತೆಯಲ್ಲಿರುವ ಮನೆಗೆ ಮಾಧವ್ ಹೋಗುವಾಗ ಬಾಡಿಗೆ ಹಂತಕರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಒಂದು ವರ್ಷದಿಂದ ನಾಪತ್ತೆ ;
ಆಸ್ತಿ ವ್ಯಾಮೋಹಕ್ಕಾಗಿ ತಂದೆಯನ್ನು ಹತ್ಯೆ ಮಾಡಲು ಹರಿಕೃಷ್ಣ ಬಾಡಿಗೆ ಹಂತಕರಿಗೆ 25 ಲಕ್ಷ ರೂಪಾಯಿ ನೀಡಿ ಕೊಲೆ ಮಾಡಿಸಿದ್ದ. ಇದಕ್ಕೆ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಸಾಥ್ ನೀಡಿದ್ದ. ಬಂಧನ ಭೀತಿಯಿಂದ ಇಬ್ಬರು ಆರೋಪಿಗಳು ತಮಿಳುನಾಡು, ಕೇರಳ ಹಾಗೂ ಗೋವಾದ ಹೊಟೇಲ್ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಸಿಕ್ಕಿಹಾಕಿಕೊಳ್ಳುವ ಭಯದಿಂದ ಮೊಬೈಲ್ ಬಳಸುತ್ತಿರಲಿಲ್ಲ. ತುರ್ತು ಸಮಯದಲ್ಲಿ ಮಾತನಾಡಬೇಕೆಂದರೆ ಅಪರಿಚಿತರಿಂದ ಮೊಬೈಲ್ ಪಡೆದು ಮಾತನಾಡಿಕೊಂಡು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿಗಳ ಕರೆ ಮಾಡಿದ ಸ್ಥಳಕ್ಕೆ ಶೋಧ ನಡೆಸಿದರೂ ಹಂತಕರ ಸುಳಿವು ಸಿಗುತ್ತಿರಲಿಲ್ಲ.
ಏಳು ವರ್ಷದ ಹಿಂದೆ ಹತ್ಯೆಗೆ ಪ್ಲಾನ್ ;
ಕೊಲೆಯಾದ ಮಾಧವ್ ಹಲವು ವರ್ಷಗಳಿಂದ ಗಣಿಗಾರಿಕೆ ತೊಡಗಿಸಿಕೊಂಡ ಪರಿಣಾಮ 100 ಕೋಟಿ ಬೆಲೆ ಬಾಳುವ ಸಾವಿರ ಎಕರೆ ಖರೀದಿ ಮಾಡಿದ್ದರು. ಬಳ್ಳಾರಿ ಸ್ಟೀಲ್, ಅಲೈ ಲಿಮಿಟೆಡ್ ಕಂಪೆನಿಗಳಿಗೆ ಮಾಲೀಕರಾಗಿದ್ದರು. ಕೆಲ ವರ್ಷಗಳಿಂದ ಮೈನಿಂಗ್ ಬಿಸಿನೆಸ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದರು. ಕಂಪೆನಿಯ ನಿರ್ದೇಶಕರಾಗಿದ್ದ ಮಗ ಹರಿಕೃಷ್ಣ ಹಾಗೂ ಮೃತರ ತಮ್ಮ ಶಿವರಾಮ್ ಪ್ರಸಾದ್ ಎಂಬುವರು ಆಸ್ತಿ ಮಾರಾಟ ಮಾಡುವಂತೆ ಮಾಧವ್ ಗೆ ಸೂಚಿಸಿದ್ದರು. ಮಗನ ಸಲಹೆಯನ್ನು ತಳ್ಳಿಹಾಕಿದ ತಂದೆಯನ್ನು ಹತ್ಯೆ ಮಾಡಲು ತೀರ್ಮಾನಿಸಿ ಸತತ ಏಳು ವರ್ಷದಿಂದ ಹೊಂಚಿ ಹಾಕಿ ಕಾಯುತ್ತಿದ್ದರು. ಕಳೆದ ವರ್ಷ ತನ್ನ ಮನೆಗೆ ಹೋಗುವಾಗ ಮಾಧವ್ ಅವರನ್ನು ಬಾಡಿಗೆ ಹಂತಕರು ಹತ್ಯೆ ಮಾಡಿದ್ದರು.
2014 ರಿಂದಲೂ ತಂದೆ ವಿರುದ್ಧ ಹಗೆತನ ಸಾಧಿಸಿಕೊಂಡು ಬಂದಿದ್ದ ಮಗ ಹರಿಕೃಷ್ಣ ಮತ್ತು ಸಹೋದರ ಶಿವರಾಮ್ ಪ್ರಸಾದ್ ಕೆಲ ವರ್ಷಗಳ ಹಿಂದೆಯೇ ಸಂಚು ರೂಪಿಸಿದ್ದರು. 2014ರಲ್ಲಿ ತಂದೆ ಮೇಲೆ ಸುಪುತ್ರನೇ ಆಸಿಡ್ ಅಟ್ಯಾಕ್ ಮಾಡಿಸಿದ್ದ. ವಿಫಲಗೊಂಡ ಬಳಿಕ ಹತ್ಯೆಗೆ ಯೋಜನೆ ರೂಪಿಸಿ ಕೊಲೆ ಮಾಡಲು ಹಂತಕರಿಗೆ ಸುಪಾರಿ ನೀಡಿದ್ದರು. ಸುಪಾರಿ ಕಿಲ್ಲರ್ ಗಳು ಜೆ.ಸಿ.ನಗರ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ಯಿಯಲ್ಲಿ ಮಾಧವ್ ಮೇಲೆ ಅಟ್ಯಾಕ್ ಮಾಡಿದ್ದರೂ ಕೂದಲೆಳೆ ಅಂತರದಿಂದ ಪಾರಾಗಿದ್ದರು. ಕೊಲೆ ಮಾಡಿಸಲು ಮೊದಲ ಎರಡು ಸುಪಾರಿ ತಂಡಗಳು ವಿಫಲವಾಗಿದ್ದರಿಂದ ಮೂರನೇ ಬಾಡಿಗೆ ಹಂತಕರ ತಂಡ 25 ಲಕ್ಷ ರೂ. ಪಡೆದು ಹತ್ಯೆ ಮಾಡಿತ್ತು.