ಬೆಂಗಳೂರು, ಫೆ. 19: ‘ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ’ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರೆಸ್ಸೆಸ್) ಹಾಗೂ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖಂಡರು ಭಾಷಣ ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಫ್‍ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕ. ದೇಶದ ಜನತೆಯನ್ನು ಒಡೆಯುವ ಪ್ರಯತ್ನದ ಹೇಳಿಕೆಗಳನ್ನು ಪಿಎಫ್‍ಐ ಮುಖಂಡರು ನೀಡಿದ್ದಾರೆಂದು ಆರೋಪಿಸಿದ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದೇಶಭಕ್ತಿಯ ಪ್ರತೀಕ ಎಂದು ಸಮರ್ಥಿಸಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಫ್‍ಐ ಮುಖಂಡರು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಇದೇ ವೇಳೆ ಆಕ್ಷೇಪಿಸಿದರು.
ಪಿಎಫ್‍ಐ ತನ್ನ ನಿಜವಾದ ಬಣ್ಣವನ್ನು ಹಲವು ಬಾರಿ ತೋರಿಸಿದೆ. ದೇಶ ವಿರೋಧಿ ಹೇಳಿಕೆ ನೀಡಿರುವ ಪಿಎಫ್‍ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಈಗಾಗಲೇ ಸೂಚಿಸುತ್ತೇನೆ. ಪ್ರಚೋದನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕ್ರಮ ನಿಶ್ಚಿತ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಗುರುವಾರ(ಫೆ.17) ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಪಿಎಫ್‍ಐನಿಂದ ಏರ್ಪಡಿಸಿದ್ದ ‘ಯುನಿಟ್ ಮಾರ್ಚ್'(ಪಥ ಸಂಚಲನ)ದಲ್ಲಿ ಪಾಲ್ಗೊಂಡಿದ್ದ ಸಂಘಟನೆಯ ಮುಖಂಡರು, ಆರೆಸ್ಸೆಸ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ಆಕ್ಷೇಪಿಸಿದ್ದರು ಎಂದು ಆರೋಪಿಸಲಾಗಿತ್ತು.