ಸುಬ್ರಹ್ಮಣ್ಯ ರಕ್ಷಿತಾರಣ್ಯದಲ್ಲಿ ಲಕ್ಷಾಂತರ ಬೆಲೆಯ ಮರ ಕಳವು…!!!
ಸ್ಥಳೀಯರು ದೂರು ನೀಡಿದರೂ ವಿಳಂಬವಾಗಿ ಆಗಮಿಸಿದ ಸಂಚಾರ ದಳದ ಅಧಿಕಾರಿಗಳು…!!!
ಕಡಬ: ಸುಬ್ರಹ್ಮಣ್ಯ ವಲಯ ಐತ್ತೂರು ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ಮರಗಳ್ಳರೊಂದಿಗೆ ಶಾಮೀಲಾಗಿ ಕದ್ದು ಮಾರಾಟ ಮಾಡಿದ್ದಾರೆ ಎಂಬ ಸ್ಥಳೀಯರ ದೂರಿನಂತೆ ಮಂಗಳೂರಿನ ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲು ಆಗಮಿಸಿದ್ದು, ಸುದ್ದಿ ತಿಳಿದ ಮಾಧ್ಯಮ ವರದಿಗಾರರು ವರದಿ ಮಾಡುವುದಕ್ಕಾಗಿ ತನಿಖಾ ಸ್ಥಳಕ್ಕೆ ತೆರಳುತ್ತಿದ್ದಾಗ ತನಿಖಾಧಿಕಾರಿಗಳು ಮಾಧ್ಯಮ ಮಂದಿಯನ್ನು ತಡೆದು ಸ್ಥಳಕ್ಕೆ ತೆರಳದಂತೆ ನಿರ್ಬಂಧ ವಿಧಿಸಿದ ಘಟನೆ ನಡೆದಿದೆ.
ಸುಬ್ರಹ್ಮಣ್ಯ ವಲಯದ ಐತ್ತೂರು ಸುಂಕದಕಟ್ಟೆ, ಬಿಳಿನೆಲೆ, ಕೊಣಾಜೆ, ಮುಜೂರು ಮುಂತಾದ ರಕ್ಷಿತಾರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಬೀಟೆ, ಸಾಗುವಾನಿ, ಬೇಂಗ, ಹೆಬ್ಬಲಸು, ಬೋವು ಹಾಗೂ ಇನ್ನೀತರ ಕಾಟು ಜಾತಿಯ ಮರಗಳನ್ನು ಕಡಿದು ಅದನ್ನು ಕೇರಳ ಭಾಗಕ್ಕೆ ಹಾಗೂ ಸ್ಥಳೀಯ ಮಿಲ್ಲುಗಳಿಗೆ ಮರಗಳ್ಳರು ಮಾರಾಟ ಮಾಡಿದ್ದಾರೆ, ಅಲ್ಲದೆ ಹಲವಾರು ಮರಗಳನ್ನು ಕಡಿದು ಹಾಕಿರುವುದು ಕಂಡು ಬಂದಿದೆ, ಈ ಅಕ್ರಮದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಈ ಹಿಂದೆ ಕಾರ್ಯನಿರ್ವಹಿಸಿದ ವಲಯ ಅರಣ್ಯಾಧಿಕಾರಿ ತ್ಯಾಗರಾಜ ಅವರು ಅರಣ್ಯ ಸಿಬ್ಬಂದಿಗಳ ಸಹಾಯದಿಂದ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ, ಅದರಲ್ಲಿ ಫಾರೆಸ್ಟರ್ ರವಿಚಂದ್ರ ಕೂಡ ಶಾಮೀಲಾಗಿದ್ದಾರೆ, ಅರಣ್ಯ ರಕ್ಷಕ ಅಶೋಕ, ಚಂದ್ರ ಪ್ರಕಾಶ್, ಫಾರೆಸ್ಟರ್ಗಳು ಜತೆ ಸೇರಿ ಕೆಲಸ ಮಾಡಿದ್ದಾರೆ ಎಂದು ಕಡಿದಿರುವ ಮರಗಳ ಕುತ್ತಿಗಳು ಹಾಗೂ ಮರದ ದಿಮ್ಮಿಗಳಿರುವ ಸ್ಥಳಗಳ ಜಿಪಿಎಸ್ ಚಿತ್ರ ಸಮೇತ ಅರಣ್ಯ ಸಂಚಾರ ದಳಕ್ಕೆ ಕೆಲ ದಿನಗಳ ಹಿಂದೆ ದೂರು ನೀಡಿದ್ದರು. ಅದರಂತೆ ಫೆ.6ರಂದು ಸಂಚಾರ ದಳದ ಅಧಿಕಾರಿಗಳು ತನಿಖೆಗೆ ಸ್ಥಳಕ್ಕೆ ಬರುವ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಿದ್ದರು, ಆದರೆ ಅಂದು ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ, ಇದೀಗ ಫೆ.8ರಂದು ಬೆಳಿಗ್ಗೆ ಬರುವುದಾಗಿ ದೂರುದಾರರಿಗೆ ತಿಳಿಸಿದ್ದು ಆದರೆ ಅಪರಾಹ್ನ 12 ಗಂಟೆ ಕಳೆದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದರು.
ಮಾಧ್ಯಮದವರನ್ನು ಕಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಲು ಹಿಂದೇಟು
ಅಧಿಕಾರಿಗಳು ಐತ್ತೂರಿಂದ ರಕ್ಷಿತಾರಣ್ಯದ ಭಾಗಕ್ಕೆ ದೂರುದಾರರೊಂದಿಗೆ ಅಧಿಕಾರಿಗಳು ತೆರಳುತ್ತಿದ್ದಾಗ ಮಾಧ್ಯಮ ವರದಿಗಾರರು ಅಲ್ಲಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಕಂಡ ಮಂಗಳೂರು ಸಂಚಾರಿ ದಳದ ಪ್ರಭಾರ ವಲಯಾರಣ್ಯಧಿಕಾರಿ ಸಂದ್ಯಾ ಅವರು ಮಾಧ್ಯಮ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಸ್ಥಳಕ್ಕೆ ಬರಬಾರದು, ನಿಮಗೇನು ಅಲ್ಲಿ ಕೆಲಸ, ದೂರುದಾರರು ಮತ್ತು ನಾವು ಮಾತ್ರ ಹೋಗುತ್ತೇವೆ, ನೀವು ಬಂದರೆ ನಿಮ್ಮದು ಅತಿಕ್ರಮಣ ಪ್ರವೇಶ ಆಗುತ್ತದೆ ಎಂದು ಹೇಳಿದ ಸಂದ್ಯಾ ಅವರು ತಮ್ಮ ಸಿಬ್ಬಂದಿಗಳೊಂದಿಗೆ ವಾಪಾಸು ಸ್ವಲ್ಪ ದೂರ (ನೆಟ್ವರ್ಕ್ ಇರುವ ಜಾಗಕ್ಕೆ) ವಾಪಾಸು ಬಂದಿದ್ದರು.
ಬಳಿಕ ಪುನಃ ಪತ್ರಕರ್ತರಿರುವ ಜಾಗಕ್ಕೆ ಬಂದ ಸಂದ್ಯಾ ಅವರು ನೀವು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಬಳಿಕ ಆಗುವ ಯಾವುದೇ ಕ್ರಮಕ್ಕೆ ನಾವು ಹೊಣೆಗಾರರಲ್ಲ ಎಂದು ತಾಕೀತು ಮಾಡಿದರು. ಈ ಬಗ್ಗೆ ಸಂಚಾರ ದಳದ ವಲಯಾರಣ್ಯಧಿಕಾರಿ ಜತೆ ಮಾತನಾಡಿದ ವರದಿಗಾರರು, ನಾವು ಮಾತ್ರ ಅರಣ್ಯಕ್ಕೆ ಹೋಗುತ್ತಿಲ್ಲ, ಅಧಿಕಾರಿಗಳು ಮತ್ತು ದೂರುದಾರರು ಇರುವ ಸಂದರ್ಭದಲ್ಲಿ ವರದಿ ಮಾಡಲು ಸ್ಥಳಕ್ಕೆ ಬರುತ್ತಿದ್ದೆವೆ, ನಾವೇನು ಅಲ್ಲಿ ಮರ ಕದಿಯಲು ಬರುತ್ತಿದ್ದೆವಾ ಎಂದು ಪ್ರಶ್ನಿಸಿದರು. ಇದಕ್ಕೆ ಮಾತನಾಡಿದ ಸಂದ್ಯಾ ಅವರು ನೀವು ಈಗಲೇ ವರದಿ ಮಾಡಬಾರದು ಅಲ್ಲಿ ತನಿಖೆ ಆಗಬೇಕು, ನೀವೆಲ್ಲ ಹೈಲೈಟ್ಸ್ ಮಾಡಿದರೆ ನಮಗೆ ತೊಂದರೆಯಾಗುತ್ತದೆ ಎಂದು ಹೇಳಿದರು, ನಿಮ್ಮ ತನಿಖೆಗೆ ನಮ್ಮಿಂದ ತೊಂದರೆ ಆಗಬಾರದು ನೀವು ತನಿಖೆ ಮಾಡಿ, ನಾವು ಇಲ್ಲಿಂದಲೇ ವಾಪಾಸು ಹೋಗುತ್ತೇವೆ ಎಂದು ಅಲ್ಲಿಂದ ವಾಪಾಸ್ಸು ಬರಲಾಯಿತು.
ಇದಕ್ಕೆನ್ನಬೇಕು?
ರಕ್ಷಿತಾರಣ್ಯದಲ್ಲಿ ಲಕ್ಷಾಂತರ ಬೆಲೆ ಬಾಳುವ ಮರಗಳು ಕಳ್ಳತನ ಆಗಿ ಅಲ್ಲದೆ ಕಡಿದು ಹಾಕಲಾಗಿರುವ ದಿಮ್ಮಿಗಳು ಕಂಡು ಬರುತ್ತಿರುವ ಬಗ್ಗೆ ಸ್ಥಳೀಯರು ಸಂಚಾರ ದಳಕ್ಕೆ ನೀಡಿದ ದೂರಿನ ಅನ್ವಯ ತಡವಾಗಿಯಾದರೂ ಅಧಿಕಾರಿಗಳು ಬಂದ ವೇಳೆ, ಅಲ್ಲಿಗೆ ಮಾಧ್ಯಮದವರಿಗೆ ನಿರ್ಬಂಧ ವಿಧಿಸುವ ಔಚಿತ್ಯ ಏನಿದೆ, ಘಟನಾ ಸ್ಥಳವನ್ನು ಸರಿಯಾಗಿ ನೊಡಿಕೊಂಡು ವರದಿ ಮಾಡಿ ಸಮಾಜಕ್ಕೆ ತಿಳಿಸಬೇಕಾದ ಜವಾಬ್ದಾರಿ ಇರುವ ಮಾಧ್ಯಮ ಮಂದಿಗೆ ಇಂತಹ ಕೆಲ ಅಧಿಕಾರಿಗಳಿಂದ ತೊಂದರೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿ ಈ ಬಗ್ಗೆ ಉನ್ನತಾಧಿಕಾರಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ ಎಂಬ ಮಾತು ಕೇಳಿ ಬಂದಿದೆ.