ಬೆಂಗಳೂರು: ರಾಜ್ಯ ಬಜೆಟ್ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ವಸತಿ ಇಲಾಖೆಯ ಮಹತ್ವದ ಪರಿಶೀಲನಾ ಸಭೆ ನಡೆಯಿತು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿರುವ ವಸತಿ ಸಚಿವ ವಿ. ಸೋಮಣ್ಣ ಅವರು, 2023ರೊಳಗೆ ಎಲ್ಲರಿಗೂ ಸೂರು ಕಲ್ಪಿಸುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು, ಒಟ್ಟು ಸುಮಾರು 3.4 ಲಕ್ಷ ಮನೆಗಳನ್ನು ಕಟ್ಟಲು ಸರ್ಕಾರ ತೀರ್ಮಾನ
ಮಾಡಿದೆ. ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಕಾಲದಲ್ಲಿ ಸರಿಯಾಗಿ ಹಣವನ್ನು ನೀಡುತ್ತಿರಲಿಲ್ಲ. ಸರ್ಕಾರದ ಯೋಜನೆಯಿದ್ದರೂ ಬ್ಯಾಂಕ್‌ಗಳು ದಾಖಲೆ ಕೇಳಿ ಫಲಾನುಭವಿಗಳನ್ನು ವೃಥಾ ಅಲೆದಾಡಿಸುತ್ತಿದ್ದರು. ಬ್ಯಾಂಕರ್‌ಗಳ ಸಭೆ ನಡೆಸಿದ್ದೇವೆ. ಜೊತೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಸದರಿ ಯೋಜನೆಗೆ ಅನುದಾನ ಪಡೆದುಕೊಳ್ಳಲು ನಿರ್ಧಾರ ಮಾಡಲಾಗಿದೆ ಎಂದರು.
ಸರ್ಕಾರ ಆರ್ಥಿಕ ಕೊರತೆ ಎದುರಿಸುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರದ ಖಜಾನೆಯಲ್ಲಿ ಹಣ ಇದೆಯೊ? ಇಲ್ಲವೋ ಅನ್ನೋದು ಮುಖ್ಯವಲ್ಲ. ಎಲ್ಲ ಅಭಿವೃದ್ಧಿ ಯೋಜನೆಗಳಿಗು ಸರ್ಕಾರದ ಬಳಿ ಹಣವಿದೆ ಎಂದರು.
ಈ ಬಾರಿಯ ಬಜೆಟ್‌ನಲ್ಲಿ ವಸತಿ ಇಲಾಖೆಗೆ ಹೊಸದಾಗಿ ಏನೂ ಕೇಳಿಲ್ಲ. ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದೇವೆ. ವಸತಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ ಎಂಬ ಭರವಸೆಯಿದೆ.
ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳಲು ಪರಿಶಿಷ್ಟಜಾತಿ ಹಾಗೂ ಪಂಗಡಕ್ಕೆ 3.5 ಲಕ್ಷ ರೂ. ಹಣವನ್ನು ಸರ್ಕಾರ ನೀಡಲಿದೆ. ಉಳಿದ ಸಮುದಾಯದವರಿಗೆ 1.5 ಲಕ್ಷ ರೂ. ಕೊಡುತ್ತೇವೆ. ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಿಕೊಳ್ಳಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು. ಬಜೆಟ್ ಬಳಿಕ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದು ವಿ. ಸೋಮಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.