‘ ತಾಂಟದೇ ಇರಲು ಈಗ ಸುಳ್ಳು ಪ್ರಕಟಣೆ ರವಾನೆ’
ಮಂಗಳೂರು: ನೀ ತಾಂಟ್ರೇ, ಬಾ ತಾಂಟ್,ಎಂಬ ಹೇಳಿಕೆ ವೈರಲ್ ಆಗಿರುವ ಜೊತೆಗೆ ಆ ಹೇಳಿಕೆಯನ್ನು ಬಳಸಬಾರದು ಎಂಬ ಸಂದೇಶ ಕೂಡಾ ಸೈಬರ್ ಕ್ರೈಂ ಪೊಲೀಸರ ಹೆಸರಲ್ಲಿ ಪ್ರಕಟಣೆ ಎಂಬಂತೆ ಹರಿದಾಡುತ್ತಿದೆ.
ಸೈಬರ್ ಕ್ರೈಂ ಪೊಲೀಸರು ಈ ರೀತಿಯ ಪ್ರಕಟಣೆ ನೀಡಿಲ್ಲ ಎಂದರೆ, SDPI ಮುಖಂಡರಲ್ಲಿ ಹಲವರು ‘ನಮಗೆ ಅಂತಹ ಅವಶ್ಯಕತೆ ಇಲ್ಲ, ಆ ಹೇಳಿಕೆ ಹಾಗೇ ಇರುತ್ತದೆ, ಅದೇನೂ ಹೇಡಿಗಳ ಹೇಳಿಕೆ ಅಲ್ಲ’ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ವಿಶೇಷ ಎಂದರೆ ಈ ಸಂದೇಶ ಸೃಷ್ಟಿ ಮಾಡಿರುವವರಿಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ತಿಳಿಯದೇ ಇರುವುದು. ದ.ಕ. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ನ ನಂಬರ್ ಅನ್ನು ಪ್ರಕಟಣೆಯಲ್ಲಿ ಬಳಸಿದ್ದಾರೆ. ಅಲ್ಲದೇ ಯಾವುದೇ ಅಧಿಕೃತ ಮೊಹರು, ಸಹಿ ಇಲ್ಲದೇ ಇರುವುದು ಈ ಸಂದೇಶದ ನಕಲಿತನ ಬಯಲು ಮಾಡುತ್ತದೆ.
ಈ ಜೊತೆಗೆ ವೈರಲ್ ಆಗಿರುವ ವಿಡಿಯೋ ಮತ್ತಷ್ಟು ಮುಂದುವರೆದಿದೆ. ಅಷ್ಟೇ ಅಲ್ಲದೇ ಯಕ್ಷಗಾನದಲ್ಲೂ ಬಳಕೆ ಆಗಿರುವ ಹಿನ್ನೆಲೆಯಲ್ಲಿ ಹೇಳಿಕೆ ಗಂಭೀರ ಪ್ರಭಾವ ಬೀರಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದೀಗ ನಕಲಿ ಪ್ರಕಟಣೆ ಆರೋಪದಲ್ಲಿ ಸೈಬರ್ ಕ್ರೈಂ ಪೊಲೀಸ್ ಕಾನೂನು ಕ್ರಮ ಜರಗಿಸುವ ಸಾಧ್ಯತೆ ಹೆಚ್ಚಾಗಿದೆ.