ಮುಂಬೈ: ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮತ್ತೆ ಕ್ಯಾತೆ ಮುಂದುವರಿದಿದ್ದು, ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೂ ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಹೆಚ್ಚು ಮರಾಠಿ ಮಾತನಾಡುವ ಏರಿಯಾಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.
‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ- ಸಂಘರ್ಷ ಮತ್ತು ಸಂಕಲ್ಪ’ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಇದುವರೆಗೆ ಏನು ನಡೆಯಿತು, ಅದು ನಡೆದು ಹೋಗಿದೆ. ನಾವೀಗ ಜಯ ಸಾಧಿಸಲು ಹೋರಾಡಬೇಕಿದೆ. ಸಮಯಕ್ಕೆ ಅನುಗುಣವಾಗಿ ನಾವು ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ದೀಪಕ್ ಪವಾರ್ ಎಂಬುವರು ಬರೆದಿದ್ದಾರೆ. ಗಡಿ ವಿವಾದಿತ ವಿಚಾರ ಒಳಗೊಂಡ ಪುಸ್ತಕವು ಮಹಾರಾಷ್ಟ್ರ ಸರ್ಕಾರದಿಂದಲೇ ಸಿದ್ಧಗೊಂಡಿದೆ. ಮುಂಬೈನ ಮಲಬಾರ್ ಬೆಟ್ಟದ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಪುಸ್ತಕ ಬಿಡುಗಡೆಯಾಗಿದ್ದು, ಕಾರ್ಯಕ್ರಮದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅನೇಕ ಮಹಾರಾಷ್ಟ್ರ ನಾಯಕರು ಭಾಗಿಯಾಗಿದ್ದರು.
ಗಡಿ ವಿವಾದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇನ್ನು ಬಾಕಿ ಉಳಿದಿದೆ. ಆದರೆ, ಕರ್ನಾಟಕ ಸರ್ಕಾರ ವರ್ತಿಸುತ್ತಿರುವ ರೀತಿಯು ನ್ಯಾಯಾಲಯದ ಉಲ್ಲಂಘನೆಯಾಗಿದೆ. ಬೆಳಗಾಂ ಹೆಸರನ್ನು ಬೆಳಗಾವಿ ಎಂದು ಬದಲಾಯಿಸಿದ್ದಾರೆ. ಅದನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿದ್ದಲ್ಲದೆ, ವಿಧಾನಸೌಧವನ್ನು ನಿರ್ಮಿಸಿ ಅಧಿವೇಶನವನ್ನು ನಡೆಸುತ್ತಿದ್ದಾರೆ. ಇದೆಲ್ಲವೂ ನ್ಯಾಯಾಂಗ ನಿಂದನೆಯಾಗಿದೆ ಎಂದು ಉದ್ಧವ್ ಠಾಕ್ರೆ ನಾಲಿಗೆ ಹರಿಬಿಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಶರಾದ್ ಪವಾರ್, ಪ್ರಕರಣ ಇನ್ನು ಕೋರ್ಟ್ ಬಾಕಿ ಉಳಿದಿದೆ. ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥ ಮಾಡಲಿದ್ದು, ನಮ್ಮ ವಿಚಾರವನ್ನು ಪರಿಣಾಮಕಾರಿಯಾಗಿ ಕೋರ್ಟ್ ಮುಂದೆ ಪ್ರಸ್ತುತ ಪಡಿಸುತ್ತೇವೆ. ಈ ನಿಟ್ಟಿನಲ್ಲಿ ಸಿಎಂ ಠಾಕ್ರೆ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.