ಉಡುಪಿ: ಇಂಧನ ಬೆಲೆ, ಅಡುಗೆ ಅನಿಲ, ಆಹಾರ ಸಾಮಗ್ರಿ, ಕಟ್ಟಡ ನಿರ್ಮಾಣ ಸಾಮಾಗ್ರಿ ಮೊದಲಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಹಿಳೆಯರು ಹೆಣಗಳನ್ನು ಹೊತ್ತುಕೊಂಡು ಸಾಗುವ ಅಣುಕು ಪ್ರದರ್ಶನ ಮಾಡಿದರು.
ಬೆಲೆ ಏರಿಕೆಯನ್ನು ಖಂಡಿಸಿ ಗುರುವಾರ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಉಡುಪಿಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಲೆಯೇರಿಕೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು ಹೆಣವನ್ನು ಹೊತ್ತುಕೊಂಡು, ಪೆಟ್ರೋಲ್ ಬೆಲೆ ಇಳಿಸಬೇಕು ನಾಗರಿಕ ಸಮಾಜ ಬದುಕಬೇಕು, ಅಡಿಗೆ ಅನಿಲ ಬೆಲೆ ಇಳಿಸಬೇಕು ಹಾಗೂ ಬಡವರ ಮನೆ ಒಲೆ ಉರಿಯ ಬೇಕು. ಆಹಾರ ಧಾನ್ಯಗಳ ಬೆಲೆ ಇಳಿಸಬೇಕು ಎಂಬ ಘೋಷ ವಾಕ್ಯಗಳ ಫಲಕಗಳ ಪ್ರದರ್ಶನದ ಮೂಲಕ ಜೋಡು ಕಟ್ಟೆಯಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕ ದ ವರೆಗೆ ಪಾದಯಾತ್ರೆ ನಡೆಸಿದರು.
ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಮಹಿಳೆಯರು ಶವವನ್ನು ಹೊತ್ತುಕೊಂಡು ಪ್ರತಿಭಟನೆಯನ್ನು ನಡೆಸುತ್ತಿರುವುದನ್ನು ನೋಡಿ ಅವರ ಕಷ್ಟಗಳನ್ನು ಅರಿತು ಸರಕಾರ ಎಚ್ಚೆತುಕೊಳ್ಳಬೇಕಾಗಿದೆ. ಒಂದು ಕಡೆ ಕಲಿತರೂ ಉದ್ಯೋಗವಿಲ್ಲ, ದುಡಿಯಬೇಕೆಂದರೂ ಉದ್ಯೋಗವಿಲ್ಲ, ಉನ್ನತ ಮಟ್ಟದಲ್ಲಿ ಕಲಿತು ಅತಿಥಿ ಉಪನ್ಯಾಸಕರಾಗಿ ಅದೆಷ್ಟು ಹೋರಾಡಿದರೂ ಬೆಲೆ ಇಲ್ಲದಾಗಿದೆ. ಅದಕ್ಕಾಗಿ ಹೆಣವನ್ನು ಹೊತ್ತುಕೊಂಡು ಅಣುಕು ಪ್ರದರ್ಶನ ಮಾಡುವ ಮೂಲಕ ನಾವುಗಳೇ ಹೆಣದ ರೀತಿ ಆಗಿದ್ದೇವೆ ಎಂಬುದನ್ನು ಸರಕಾರಕ್ಕೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯ ವಸ್ತುಗಳಿಂದ ಹಿಡಿದು ಪೆಟ್ರೋಲ್, ಡೀಸೆಲ್, ಕಬ್ಬಿಣ, ಸಿಮೆಂಟ್ ನ ಬೆಲೆಗಳು ಏರಿಕೆ ಆಗುತ್ತಿರುವುದು ನ್ನು ಗಮನಿಸಿದರೆ ಇಲ್ಲಿ ಬದುಕಲು ಸಾಧ್ಯವೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ನಾಗರಿಕ ಸಮಿತಿ ಟ್ರಸ್ಟ್‍ನ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.