ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಬದಮನೆ ಅಬ್ಬಿ ಜಲಪಾತದಲ್ಲಿ ಗುಡ್ಡ ಕುಸಿತದಿಂದಾಗಿ ಮಣ್ಣಿನಡಿ ಸಿಲುಕಿದ್ದ ಉಜಿರೆಯ ವಿದ್ಯಾರ್ಥಿ ಸನತ್ ಶೆಟ್ಟಿ (18) ಮೃತದೇಹ ಶೋಧಕಾರ್ಯ ವಿಫಲವಾಗಿದೆ. ಜಲಪಾತದಲ್ಲಿ ಸೋಮವಾರ ಸಂಭವಿಸಿದ್ದ ಭೂಕುಸಿತದಿಂದಾಗಿ ಸನತ್ ಭಾರೀ ಪ್ರಮಾಣದ ಮಣ್ಣು ಮತ್ತು ಇತರ ಭಗ್ನಾವಶೇಷಗಳಡಿ ಸಿಲುಕಿದ್ದರು.
ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ ಘಟಕ, ಪೊಲೀಸ್, ಧರ್ಮಸ್ಥಳದ ವಿಪತ್ತು ನಿರ್ವಹಣಾ ತಂಡ ಮತ್ತು 150 ಕ್ಕೂ ಹೆಚ್ಚು ಸ್ಥಳೀಯರು ಮಣ್ಣಿನ ಪದರಗಳನ್ನು ಸರಿಸಲು ಇಡೀ ದಿನ ಮಾಡಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಸಂಜೆ 6 ಗಂಟೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ದುರ್ಗಮ ಪ್ರದೇಶವಾದ ಕಾರಣ ಜೆಸಿಬಿಗಳು ಘಟನಾ ಸ್ಥಳ ತಲುಪಲು ಸಾಧ್ಯವಾಗಿಲ್ಲ. ಅಲ್ಲದೆ ಮಣ್ಣಿನ ಪದರವು ಇಡೀ ಜಲಪಾತವನ್ನು ಆವರಿಸಿದೆ.
ಈ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ ಮೊದಲ ಘಟನೆ ಇದಾಗಿದೆ, ಕೆಲವು ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿನ ಸೋರಿಕೆ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಶಾಸಕ ಹರೀಶ್ ಪೂಂಜ, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ,, ಹಂಗಾಮಿ ತಹಶೀಲ್ದಾರ್ ರಮೇಶ್ ಬಾಬು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸನತ್ ಅವರ ಸಹೋದರ ಶಮಿತ್ ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.