ಮಂಗಳೂರು ನಗರಕ್ಕೆ 24×7 ನೀರು ಸರಬರಾಜು ವ್ಯವಸ್ಥೆಯ ವಿತರಣಾ ಜಾಲ ಬಲಪಡಿಸುವಿಕೆಯ ಭಾಗವಾಗಿ ವೆಲೆನ್ಸಿಯಾದಲ್ಲಿ ನೀರಿನ ಟ್ಯಾಂಗ್ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ದಿನದ 24 ಗಂಟೆ ನೀರು ಸರಬರಾಜು ಮಾಡುವ ಕಾಮಗಾರಿಯು ಪ್ರಗತಿಯಲ್ಲಿಗೆ. ಅದರ ಭಾಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ಜಪ್ಪಿನಮೊಗರು, ವೆಲೆನ್ಸಿಯಾ, ಫಳ್ನೀರ್ ಹಾಗೂ ಬೆಂದೂರ್ ವಾರ್ಡಿಗೆ ನೀರು ಸರಬರಾಜು ಮಾಡುವ ಸಲುವಾಗಿ ಟ್ಯಾಂಕ್ ನಿರ್ಮಾಣಕ್ಕೆ 3.75 ಕೋಟಿ ಅನುದಾನ ಮೀಸಲಿಡಲಾಗಿದ್ದು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು ಎಂದರು.
15 ಲಕ್ಷ ಲೀಟರ್ ಸಾಮರ್ಥ್ಯದ 1538 ಮನೆಗಳಿಗೆ ಇಲ್ಲಿಂದ ನೀರು ಸರಬರಾಜು ಮಾಡಲಾಗುತ್ತದೆ. ಬೇಸಿಗೆಯ ಪ್ರಾರಂಭದಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುವ ಮಂಗಳೂರಿಗೆ ಇದು ಬಹಳಷ್ಟು ಉಪಕಾರಿಯಾಗಲಿದೆ. ಟ್ಯಾಂಕ್ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಿದ ವೆಲೆನ್ಸಿಯಾ ಚರ್ಚಿನ ಧರ್ಮಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಶಾಸಕ ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆಯ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ, ಪಾಲಿಕೆ ಸದಸ್ಯರಾದ ಜಸಿಂತಾ ವಿಜಯ ಆಲ್ಫ್ರೇಡ್, ಸಂದೀಪ್ ಗರೋಡಿ, ವೀಣಾ ಮಂಗಳ, ಭಾನುಮತಿ, ರೇವತಿ, ಭರತ್ ಸೂಟರ್ ಪೇಟೆ, ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಸಿಎಸ್ಐ ಬಿಷಪ್ ರೈಟ್ ರೆವ್. ಮೋಹನ್ ಮನೋರಾಜ್, ಬಿಜೆಪಿಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.