ವೈರಲ್ ಆಯ್ತು ಹಿಂದೂ ಯುವಕನ ವೀಡಿಯೋ…
ಆ ತಾಯಿಗೆ ಬಂತು ಮುಸ್ಲಿಂ ಉದ್ಯಮಿಯ ನೆರವು…
ಇದು ಜಾತಿ, ಮತವನ್ನ ಬದಿಗೊತ್ತಿ ಮಾನವೀಯತೆ ಮೇಲು ಎಂಬುದನ್ನ ತೋರಿಸಿದ ಸ್ಟೋರಿ…
ಮಂಗಳೂರು: ಇಂದೋ ನಾಳೆಯೋ ಅನ್ನೋ ಮಣ್ಣಿನ ಗೋಡೆಯ ಮನೆಯಲ್ಲಿ ವಾಸ. ಮಳೆ ಬಂದ್ರೆ ಮನೆ ಒಳಗೆ ನೀರು ಬೀಳೋವಂತ ಸ್ಥಿತಿ. ಸರಿಯಾಗಿ ಒಂದು ಹೊತ್ತಿನ ಊಟ ಮಾಡೋಣ ಅಂದ್ರೆ ಅದಕ್ಕೂ ಕಿತ್ತು ತಿನ್ನುವಂತ ಬಡತನ. ಇದ್ದ ಒಬ್ಬ ಮಗನಿಗೂ ದುಡಿಯಲು ಆಗದಂತ ಸ್ಥಿತಿ. ಇದು ಬಂಟ್ವಾಳದ ಪಂಜಿಕಲ್ಲಿನ ಗರೋಡಿ ಸಮೀಪ ಇರುವ ಚಿನ್ನು ಅನ್ನೋ ತಾಯಿಯ ಕಣ್ಣೀರ ಕಥೆ.
ಹೌದು ಓದುಗರೇ ಇಂತಹ ಪರಿಸ್ಥಿತಿಯಲ್ಲಿರುವ ಈ ತಾಯಿಯ ನೋವನ್ನ ಕಂಡು ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ವಿಶು ಪೂಜಾರಿ ಮತ್ತು ವಿಜಯ್ ತನ್ನ ಸ್ವಂತ ಖರ್ಚಿನಲ್ಲಿ ಆ ತಾಯಿಯ ಮನೆಗೆ ಬೇಕಾದ ಆಹಾರ ಸಾಮಾಗ್ರಿಗಳನ್ನ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅದರ ಜೊತೆಗೆ ಆ ಮನೆಯ ವೀಡಿಯೋವನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಕಾರಣ ಇಷ್ಟೇ, ಈ ವೀಡಿಯೋವನ್ನಾದರೂ ನೋಡಿ ದಾನಿಗಳು ಮುಂದೆ ಬಂದು ಆ ತಾಯಿಯ ಕಷ್ಟಕ್ಕೆ ಸ್ಪಂದಿಸಲಿ…ಅದ್ರಂತೆ ಇದೀಗ ಮುಸ್ಲಿಂ ಉದ್ಯಮಿ ವಾಮದಪದವು ಕುಕ್ಕುದಕಟ್ಟೆ ನಿವಾಸಿ ರಫೀಕ್ ಅಜ್ಜಿಗೆ ಮತ್ತು ಮಗನಿಗೆ ಚಪ್ಪಲಿ, ಬಟ್ಟೆಯಿಂದ ಹಿಡಿದು ಸುಮಾರು ಒಂದು ತಿಂಗಳಿಗೆ ಆಗುವಷ್ಟು ಮನೆ ಸಾಮಾಗ್ರಿಗಳನ್ನು ನೀಡಿ ಜಾತಿ ಮತ ಯಾವುದೇ ಇರಲಿ ಮಾನವೀಯತೆ ಮೊದಲು ಎಂಬುದನ್ನ ಎತ್ತಿ ತೋರಿಸಿದ್ದಾರೆ.