ನವದೆಹಲಿ: ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ದಾಳಿ ನಡೆಸಿ, ಹಿಂಸಾಚಾರಕ್ಕೆ ಕಾರಣವಾದ ಬೆನ್ನಲ್ಲೇ ಕೆಲ ರೈತ ಸಂಘಟನೆಗಳು ಹೋರಾಟದಿಂದ ಹಿಂದೆ ಸರಿಯುವುದಾಗಿ ಹೇಳಿಕೊಂಡಿದೆ. ಈ ರೀತಿಯ ಹೋರಾಟ ನಡೆಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಂಘಟನೆಗಳು ಹೇಳಿವೆ.
ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿವೆ. ನಾವು ಹೋರಾಟ ನಡೆಸುತ್ತೇವೆ, ಆದರೆ ಈ ರೀತಿಯಲ್ಲಲ್ಲ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ನಾಯಕ ವಿ.ಎಂ.ಸಿಂಗ್ ತಿಳಿಸಿದ್ದಾರೆ. ಯಾರೋ ವಿಭಿನ್ನ ನಿರ್ದೇಶನ ಇರುವ ಹೋರಾಟಗಾರರೂ ಇದರಲ್ಲಿದ್ದಾರೆ. ಅವರೊಂದಿಗೆ ನಾವು ಹೋರಾಡಲು ಸಾಧ್ಯವಿಲ್ಲ. ಎಂಎಸ್ಪಿ ಗ್ಯಾರಂಟಿ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ, ಆದರೆ ಈ ರೀತಿಯ ಹೋರಾಟವಲ್ಲ ಎಂದು ಅವರು ತಿಳಿಸಿದ್ದಾರೆ.
ಜನರನ್ನು ಸಾಯಿಸಲು ಅಥವಾ ಥಳಿಸಲು ನಾವು ಇಲ್ಲಿಗೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘರ್ಷಣೆಗಳಿಂದ ತಮಗೆ ತೀವ್ರ ನೋವಾಗಿದೆ ಎಂದು ಬಿಕೆಯು ಅಧ್ಯಕ್ಷ ಠಾಕೂರ್ ಭಾನು ಪ್ರತಾಪ್ ಸಿಂಗ್ ಹೇಳಿದ್ದಾರೆ. ‘ನಿನ್ನೆ ದೆಹಲಿಯಲ್ಲಿ ಸಂಭವಿಸಿದ್ದನ್ನು ಕಂಡು ನಮಗೆ ನೋವಾಗಿದೆ. ನಮ್ಮ 58 ದಿನಗಳ ಪ್ರತಿಭಟನೆಯನ್ನು ಕೊನೆಗೊಳಿಸುತ್ತಿದ್ದೇವೆ’ ಎಂದು ಅವರು ಹೇಹೇಳಿದರು.