ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಹಿಜಾಬ್‌ನಂತಹ ವಿವಾದಕ್ಕೆ ಆಸ್ಪದವಿಲ್ಲ. ಶಾಲೆ ಸರಸ್ವತಿಯ ದೇಗುಲ. ಶಾಲೆ ನಿಯಮದ ಜೊತೆಗೆ ಕಲಿಯುವುದು ವಿದ್ಯಾರ್ಥಿಗಳ ಧರ್ಮ. ಅದರೊಟ್ಟಿಗೆ ಧರ್ಮ ಬೆರೆಸುವುದು ಸರಿಯಲ್ಲ. ಶಾಲೆಯ ನಿಯಮಕ್ಕೆ ಒಪ್ಪದಿದ್ದರೆ ಬೇರೆ ದಾರಿ ನೋಡಿಕೊಳ್ಳಲಿ ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ. ಟಿಪ್ಪು ಜಯಂತಿ, ಶಾದಿಭಾಗ್ಯದಂತಹ ಯೋಜನೆಗಳ ರೂವಾರಿ ಸಿದ್ದರಾಮಯ್ಯ, ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಕಾಲದಲ್ಲಿ ಸಾಮರಸ್ಯ ಕದಡುವ ಎಷ್ಟು ಘಟನೆಗಳು ನಡೆದಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್ ಮಾತನಾಡಿ, ಹಿಜಾಬ್ ವಿವಾದ ವ್ಯವಸ್ಥಿತ ಷಡ್ಯಂತ್ರ. ಮನೆಯಿಂದ ಶಾಲೆ-ಕಾಲೇಜು ಕಾಂಪೌಂಡ್‌ವರೆಗೆ ಹಿಜಾಬ್ ಧರಿಸಿಯೇ ಬರಲಿ. ಆದರೆ ತರಗತಿಯಲ್ಲಿ ಹಿಜಾಬ್ ತೆಗೆದು ಸಮವಸ್ತ್ರದಲ್ಲಿಯೇ ಹಾಜರಾಗಬೇಕು ಎಂದು ಹೇಳಿದರು.
ಹಿಜಾಬ್ ವ್ಯಕ್ತಿಯ ಸ್ವಾತಂತ್ರ್ಯ ಎಂದು ಸಿದ್ದರಾಮಯ್ಯ ಸೇರಿ ಹಲವರು ಹೇಳುತ್ತಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು, ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಒದಗಿಸಲಿ ಎಂದರು.
ತ್ರಿವಳಿ ತಲಾಕ್ ರದ್ದು ಮಾಡುವ ಮೂಲಕ ಭದ್ರತೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಮುಸ್ಲಿಂ ಮಹಿಳೆಯರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಎಸ್‌ಡಿಪಿಐ, ಸಿದ್ದರಾಮಯ್ಯ, ಖಾದರ್ ಅವರ ಮಾತು ಕೇಳಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸಂಪುಟ ವಿಸ್ತರಣೆ: ಸಿಎಂ ವಿವೇಚನೆ
ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಅಗತ್ಯ ಎನಿಸಿದಾಗ ವರಿಷ್ಠರ ಜೊತೆಗೆ ಮಾತನಾಡಿ ಈ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಳಿನ್‌ಕುಮಾರ್ ಕಟೀಲ್ ಹೇಳಿದರು.
ಶಾಸಕರಾದವರು ಸಚಿವರಾಗಬೇಕು ಎನ್ನುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ, ಆ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ನಳಿನ್ ಕುಮಾರ್, ಪ್ರಧಾನಿ ಮೋದಿ ತಾಲಿಬಾನ್‌ಗೆ 200 ಕೋಟಿ ರೂಪಾಯಿ ನೀಡಿದಾಗ ನೀವು ಎಲ್ಲಿದ್ದೀರಿ? ಕೋಮುವಾದ ಮಾಡಲು ಪ್ರಯತ್ನಿಸಬೇಡಿ. ಮುಗ್ಧ ಜನರೊಂದಿಗೆ ಆಟವಾಡುವುದನ್ನು ನಿಲ್ಲಿಸಿ.